ಗೌಡ, ಕೆ ಸಿ ಎನ್-
(1962- ). ಕೆ.ಸಿ.ಎನ್.ಸಂಸ್ಥೆ ಕನ್ನಡ ಚಿತ್ರ ನಿರ್ಮಾಣ, ಹಂಚಿಕೆ ಮತ್ತು ಪ್ರದರ್ಶನ ವಲಯದಲ್ಲಿ ದೊಡ್ಡ ಹೆಸರು. ಈ ಸಂಸ್ಥೆಯ ಒಡೆಯರೇ ಕೆ.ಸಿ.ಎನ್.ಗೌಡರು. ಮೂಲತಃ ದೊಡ್ಡಬಳ್ಳಾಪುರದ ಸಮೀಪದ ಮರಳೇನ ಹಳ್ಳಿಯ ರೈತ ಕುಟುಂಬದಲ್ಲಿ  ಕೆ.ಸಿ.ಎನ್. ಗೌಡರು 1926ರ ಜನವರಿ 6 ರಂದು ಜನಿಸಿದರು. ತಂದೆ ಕೆ. ಚವಡಯ್ಯ, ತಾಯಿ ಮುದ್ದಮ್ಮ. ಹಿರಿಯರ ಕಾಲದಿಂದಲೂ ಇವರದು ರೇಷ್ಮೆ ಉದ್ಯಮ. ಇವರ ರೇಶಿಮೆಗೆ ಜವಳಿಗೆ ಭಾರಿ ಬೇಡಿಕೆ. ವ್ಯಾಪಾರವೂ ಭಾರಿ. ಈ ಉದ್ಯಮದ ಜೊತೆಗೆ ಬಣ್ಣದ ಲೋಕದ ವ್ಯಾಪಾರಕ್ಕೂ ಇಳಿದರು. ದೊಡ್ಡಬಳ್ಳಾಪುರದಲ್ಲಿ ``ಸೌಂದರ್ಯಮಹಲ್, ಬೆಂಗಳೂರಿನಲ್ಲಿ ``ನವರಂಗ್, ಊರ್ವಶಿ ಚಿತ್ರಮಂದಿರಗಳನ್ನು ನಿರ್ಮಿಸಿ ಪ್ರದರ್ಶಕರಾದರು. ಕೆ.ಸಿ.ಎನ್.ಸಂಸ್ಥೆ ಸ್ಥಾಪಿಸಿ ವಿತರಕರಾಗಿ ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ನೆರವಾದರು. ರಾಜಕಮಲ್ ಆಟ್ರ್ಸ್ ಸಂಸ್ಥೆ ಆರಂಭಿಸಿ ದೊಡ್ಡ ಮಟ್ಟದಲ್ಲಿ ಚಿತ್ರನಿರ್ಮಾಪಕರೂ ಆದರು. ಜೊತೆಗೆ ತಮ್ಮ ಇಬ್ಬರು ಪುತ್ರರನ್ನು-ಕೆ.ಸಿ.ಎನ್.ಚಂದ್ರಶೇಖರ್ ಮತ್ತು ಕೆ.ಸಿ.ಎನ್.ಮೋಹನ್-ಇವರನ್ನು ಚಿತ್ರೋದ್ಯಮದಲ್ಲಿ ತೊಡಗಿಸಿದರು. ಕೆ.ಸಿ.ಎನ್.ಚಂದ್ರಶೇಖರ್ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಹಾಗೂ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯಮಂಡಳಿಗಳ ಅಧ್ಯಕ್ಷರಾಗಿ ಉದ್ಯಮದ ಬೆಳವಣಿಗೆಗೆ ನೆರವಾಗಿದ್ದಾರೆ. ಶ್ರೇಷ್ಠ ನಿರ್ಮಾಪಕರೂ ಹಾಗೂ ವಿತರಕರೆಂದೂ ಹೆಸರು ಪಡೆದರು. ಕೆ.ಸಿ.ಎನ್.ಮೋಹನ್ ಅವರೂ ಸಹ ನಿರ್ಮಾಪಕ-ವಿತರಕರಾಗಿ ತಮ್ಮ ಸೋದರನಂತೆಯೇ ಪ್ರಸಿದ್ಧರಾದರು.

ಕೆ.ಸಿ.ಎನ್.ಗೌಡರು, ಸಾರ್ವಕಾಲಿಕ ದಾಖಲೆ ನಿರ್ಮಿಸಿದ ``ಬಂಗಾರದ ಮನುಷ್ಯ ಚಿತ್ರದ ನಿರ್ಮಾಪಕರಿಗೆ ನೆರವು ನೀಡಿ, ಆ ಚಿತ್ರದ ವಿತರಣೆಯನ್ನೂ ಮಾಡಿದರು. ``ಹುಲಿಯ ಹಾಲಿನ ಮೇವು, ``ಬಬ್ರುವಾಹನ ದಂತಹ ಅದ್ದೂರಿಯ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದರಲ್ಲದೆ, ಉತ್ತಮ ಅಭಿರುಚಿಯ ಯಶಸ್ವಿ ಚಿತ್ರಗಳಾದ `ಶರಪಂಜರ ``ಭಲೇಜೋಡಿ'' ಮುಂತಾದ ನೂರಕ್ಕೂ ಹೆಚ್ಚು  ಚಿತ್ರಗಳ ಹಂಚಿಕೆದಾರರು. ಕಸ್ತೂರಿ ನಿವಾಸ, ತಾಯಿ ದೇವರು, ಬಭ್ರುವಾಹನ, ದಾರಿ ತಪ್ಪಿದಮಗ, ದೂರದ ಬೆಟ್ಟ, ಹುಲಿಯ ಹಾಲಿನಮೇವು, ಸನಾದಿ ಅಪ್ಪಣ್ಣ, ಭಕ್ತ ಸಿರಿಯಾಳ, ರಂಗನಾಯಕಿ ಮೊದಲಾದ ಚಿತ್ರಗಳನ್ನು ತೆರೆಗಿತ್ತರು. ಹುಣಸೂರು ಕೃಷ್ಣಮೂರ್ತಿ, ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ವಿಜಯಾರೆಡ್ಡಿ ಮೊದಲಾದ ಪ್ರತಿಭಾವಂತ ನಿರ್ದೇಶಕರಿಗೆ ಪ್ರೋತ್ಸಾಹಿಸಿ, ಉತ್ತಮ ಚಿತ್ರಗಳ ನಿರ್ಮಾಣಕ್ಕೆ ನೆರವಾಗಿದ್ದರು.            

ಚಲನಚಿತ್ರ ವಹಿವಾಟು ಕೇಂದ್ರವಾದ ಗಾಂಧಿನಗರದಲ್ಲಿ ಕೆ.ಸಿ.ಎನ್.ಸಂಸ್ಥೆ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಹಲವು ದಶಕಗಳ ಕಾಲ ಮೆರೆಯಿತು. ಕೆ.ಸಿ.ಎನ್.ಗೌಡರ ``ನವರಂಗ್ ಚಿತ್ರಮಂದಿರ ಕನ್ನಡ ಚಿತ್ರಗಳಿಗೇ ಮೀಸಲಾಗಿರುವುದು ಗಮನಾರ್ಹ.

ಕರ್ನಾಟಕ ರಾಜ್ಯ ಸರ್ಕಾರ ಚಿತ್ರೋದ್ಯಮದಲ್ಲಿನ ಕೆ.ಸಿ.ಎನ್.ಗೌಡರ ವಿಶಿಷ್ಟ ಸೇವೆಗಾಗಿ 2002-2003ನೆ ಸಾಲಿನ ರಾಜಕುಮಾರ್ ಪ್ರಶಸ್ತಿಯನ್ನಿತ್ತು ಗೌರವಿಸಿದೆ.							(ಶ್ರೀಕೃಪಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ